Saturday, October 16, 2021

ಜಿ.ಕೆ. ಗೋವಿಂದರಾವ್‌

 ಜಿ.ಕೆ. ಗೋವಿಂದರಾವ್‌ ಅವರು ಚಿಂತಕ, ನಟ ಹಾಗೂ ಕನ್ನಡ ಬರಹಗಾರ. ಅವರು ಬೆಂಗಳೂರಿನ ಸಂತ ಜೋಸೆಫ್‌ ವಾಣಿಜ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಅವರು ತಮ್ಮ ಜೀವಿತದ ಕೊನೆಯವರೆಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು.

ಸಾಹಿತ್ಯ ಕೃಷಿ

ಪ್ರಸಿದ್ಧ ಬರಹಗಾರರಾಗಿದ್ದ ಅವರು ಕೆಳಕಂಡ ಕೃತಿಗಳನ್ನು ರಚಿಸಿದ್ದರು.

  1. ಈಶ್ವರ ಅಲ್ಲಾ

  2. ಷೇಕ್ಸ್ಪಿಯರ್:‌ ಎರಡು ನಾಟಕಗಳ ಅಧ್ಯಯನ

  3. ನಡೆ ನುಡಿ

  4. ನಾಗರಿಕತೆ ಮತ್ತು ಅರಾಜಕತೆ

  5. ಬಿಂಬ ಪ್ರತಿಬಿಂಬ

  6. ಮನು ವರ್ಸಸ್‌ ಅಂಬೇಡ್ಕರ್‌

  7. ಗಾಂಧೀಜಿಯ ಉಪವಾಸಗಳು

ನಟನೆ

ರಂಗಭೂಮಿಯ ನಟ ಹಾಗೂ ನಿರ್ದೇಶಕರಾಗಿದ್ದ ಅವರು ʼಕಥಾ ಸಂಗಮʼ, ʼಗ್ರಹಣʼ, ʼಬಂಧನʼ, ʼಮಹಾಪರ್ವʼ, ʼಜಗತ್‌ ಕಿಲಾಡಿʼ, ʼಲಾಕಪ್‌ ಡೆತ್‌ʼ ಮೊದಲಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಜನಪ್ರಿಯ ಟಿ.ವಿ. ಧಾರಾವಾಹಿ ʼಮಾಲ್ಗುಡಿ ಡೇಸ್‌ʼನಲ್ಲಿ ಕೂಡ ನಟಿಸಿದ್ದರು.

ಮರಣ

ಗೋವಿಂದರಾವ್‌ ಅವರು ದಿನಾಂಕ ೧೫-೧೦-೨೦೨೧ರಂದು ತಮ್ಮ ೮೪ನೇ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು.

Sunday, July 11, 2021

ಕಲ್ಲು ಸೇವೆ - ಹೀಗೊಂದು ಜನಪದ ಆಚರಣೆ

ಗಂಗಮ್ಮನ ಗುಡ್ಡೆ, ಶೆಟ್ಟಿಗೆರೆ, ಕುಣಿಗಲ್‌ ತಾಲ್ಲೂಕು

ಕುಣಿಗಲ್‌ನಿಂದ ಈಶಾನ್ಯ ದಿಕ್ಕಿಗೆ ೧೦ ಕಿ.ಮೀ. ಹೋದರೆ ಶೆಟ್ಟಿಗೆರೆ ಸಿಗುತ್ತದೆ. ಕುಣಿಗಲ್‌ನಿಂದ ಶೆಟ್ಟಿಗೆರೆಗೆ ಹೋಗುವ ದಾರಿಯಲ್ಲಿ ಬಲಗಡೆಗೆ ಎರಡು ಕಲ್ಲುಗುಡ್ಡೆಗಳು ಕಾಣಿಸುತ್ತವೆ. ಇವನ್ನು ಸ್ಥಳೀಯ ಜನರು ‘ಗಂಗಮ್ಮನ ಗುಡ್ಡೆ’ ಎನ್ನುತ್ತಾರೆ. ದಾರಿಯಲ್ಲಿ ಹೋಗುವವರೆಲ್ಲ ಅದರ ಮೇಲೆ ಮೂರು ಕಲ್ಲುಗಳನ್ನು ಎಸೆದು ಹೋಗುತ್ತಾರೆ. ಇದನ್ನು ‘ಕಲ್ಲು ಸೇವೆ’ ಎನ್ನುತ್ತಾರೆ. 

ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಮಾತು. ಆ ಊರಿನ ಪಟೇಲರ ಮಗಳು ಗಂಗಮ್ಮನನ್ನು ಕೋಘಟ್ಟ ಗ್ರಾಮದ ವರನಿಗೆ ಕೊಟ್ಟು ಮದುವೆ ಮಾಡಿದ್ದರು. ತುಂಬು ಗರ್ಭಿಣಿಯಾಗಿದ್ದ ಆಕೆಯನ್ನು ಹೆರಿಗೆಗೆಂದು ತವರಿಗೆ ಕರೆದುಕೊಂಡು ಬಂದಿದ್ದರು. 

ಒಂದು ದಿನ ಗಂಗಮ್ಮ ಎಣ್ಣೆ ಬಟ್ಟಲನ್ನು ಮುಂದಿಟ್ಟುಕೊಂಡು ತಲೆ ಬಾಚಿಕೊಳ್ಳಲು ಅಣಿಯಾಗುತ್ತಿದ್ದಾಗ ಒಬ್ಬ ಬುಡುಬುಡಿಕೆಯವನು ಬಂದ. ಗಂಗಮ್ಮ ಎಣ್ಣೆ ಬಟ್ಟಲನ್ನು ಅಲ್ಲಿಯೇ ಬಿಟ್ಟು ಭಿಕ್ಷೆ ತರಲು ಒಳಗೆ ಹೋದಳು. ಆಕೆ ಒಳಗೆ ಹೋಗುವುದನ್ನೇ ಕಾಯುತ್ತಿದ್ದ ಬುಡುಬುಡಿಕೆಯವನು, ಎಣ್ಣೆ ಬಟ್ಟಲಿಗೆ ವಿಷವನ್ನು ಹಿಂಡಿದ. ಇದನ್ನು ಅರಿಯದ ಗಂಗಮ್ಮ, ಬುಡುಬುಡಿಕೆಯವನಿಗೆ ಭಿಕ್ಷೆ ಹಾಕಿ, ನಂತರ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಾಳೆ. ತತ್ಪರಿಣಾಮವಾಗಿ ಆಕೆ ಸಾವನ್ನಪ್ಪುತ್ತಾಳೆ. ಯಾರದೋ ಕನಸಿಗೆ ಬಂದು, ತನ್ನನ್ನು ಮಣ್ಣು ಮಾಡಬಾರದೆಂದೂ, ಕಲ್ಲುಗಳಿಂದ ಮುಚ್ಚಬೇಕೆಂದೂ ಹೇಳುತ್ತಾಳೆ. ತನಗೆ ಗುಡಿ ಕಟ್ಟಬಾರದೆಂದೂ ಹೇಳುತ್ತಾಳೆ. 

ಗಂಗಮ್ಮನ ಆಸೆಯಂತೆ ಆಕೆಯ ಶವವನ್ನು ಕಲ್ಲುಗಳಿಂದ ಮುಚ್ಚುತ್ತಾರೆ. ಒಂದೆರಡು ದಿನಗಳ ಬಳಿಕ ಅದೇ ಬುಡುಬುಡಿಕೆಯವನು ಗಂಗಮ್ಮನ ಸಮಾಧಿಯ ಬಳಿ ಬಂದು, ಮಾಟ ಮಂತ್ರದ ಉದ್ದೇಶಕ್ಕಾಗಿ, ಆಕೆಯ ಹಸ್ತ ಹಾಗೂ ಪಾದಗಳನ್ನು ಕತ್ತರಿಸಿಕೊಂಡು ಹೋಗುತ್ತಾನೆ.  

ಪಕ್ಕದ ಹಳ್ಳಿಯವನೊಬ್ಬ ರಾತ್ರಿಯ ಹೊತ್ತಿನಲ್ಲಿ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದ. ಸಮಾಧಿಯ ಬಳಿ ಬರುತ್ತಿದ್ದಂತೆ ಹೊಟ್ಟೆ ನೋವು ತಾಳಲಾರದೆ ಕುಸಿದು ಬಿದ್ದ. ಗಂಗಮ್ಮ ಆತನ ಮೈಮೇಲೆ ಬಂದು ಆ ದಾರಿಯಲ್ಲಿ ಹೋಗುವವರೆಲ್ಲ ತನ್ನ ಸಮಾಧಿಯ ಮೇಲೆ ಮೂರು ಕಲ್ಲುಗಳನ್ನು ಎಸೆಯಬೇಕೆಂದು ಹೇಳಿದಳು.

ಕೆಲವು ದಿನಗಳ ನಂತರ ಗಂಗಮ್ಮ ಸೊಬಗಾನಹಳ್ಳಿ ಗ್ರಾಮದ ಬಸುರಿಯೊಬ್ಬಳ ಕನಸಿನಲ್ಲಿ ಬಂದು ತನಗೆ ಸಲ್ಲುತ್ತಿರುವ ಸೇವೆಯಲ್ಲಿ ಅರ್ಧ ಸೇವೆಯನ್ನು ಅವಳಿಗೂ ಕೊಡಿಸುವುದಾಗಿ ಹೇಳುತ್ತಾಳೆ. ಒಂದೆರಡು ದಿನಗಳಲ್ಲಿ ಆ ಬಸುರಿ ಹೆಂಗಸು ಮರಣವನ್ನಪ್ಪುತ್ತಾಳೆ. ಆಕೆಯ ಶವವನ್ನೂ ಗಂಗಮ್ಮನ ಸಮಾಧಿಯ ಪಕ್ಕದಲ್ಲೇ ಕಲ್ಲುಗಳಿಂದ ಮುಚ್ಚುತ್ತಾರೆ. ಗಂಗಮ್ಮನ ಸಮಾಧಿ ಪೂರ್ವ ಪಶ್ಚಿಮವಾಗಿದ್ದರೆ, ಇನ್ನೊಬ್ಬ ಹೆಂಗಸಿನ ಸಮಾಧಿ ಉತ್ತರ ದಕ್ಷಿಣವಾಗಿದೆ. ಇಬ್ಬರ ಸಮಾಧಿಗಳೂ ಆಯತಾಕಾರದ ಕಲ್ಲು ರಾಶಿಗಳಾಗಿ ಬೆಳೆದಿವೆ. 

ಈಗಲೂ ಆ ದಾರಿಯಲ್ಲಿ ಹೋಗುವವರು ಸಮಾಧಿಯ ಮೇಲೆ ಮೂರು ಕಲ್ಲುಗಳನ್ನು ಎಸೆದು ಹೋಗುತ್ತಾರೆ. ಕೆಲವು ಹೆಂಗಸರು ವರ್ಷಕ್ಕೊಮ್ಮೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಪೂಜೆ ಮಾಡುವವರ ಅನುಕೂಲಕ್ಕಾಗಿ ಬಾವಿ ತೆಗೆಸಬೇಕೆಂದು ಜೋಯಿಸರನ್ನು ಕೇಳುತ್ತಾರೆ. ಜೋಯಿಸರು ಬಾವಿ ತೆಗೆದರೆ ಒಂದು ಸರ್ಪ ಹಾಗೂ ಒಂದು ಕಪ್ಪೆ ಸಿಗುತ್ತದೆ ಎಂದು ಹೇಳಿದ್ದರಿಂದ ಬಾವಿ ತೆಗೆಯುವ ಪ್ರಯತ್ನವನ್ನು ಕೈಬಿಡುತ್ತಾರೆ. 

ಈ ಸಮಾಧಿಗಳು ಶೆಟ್ಟಿಗೆರೆ ಗ್ರಾಮದಿಂದ ಪಶ್ಚಿಮಕ್ಕೆ ಒಂದು ಕಿ.ಮೀ. ದೂರದಲ್ಲಿ ಶೆಟ್ಟಿಗೆರೆ-ಕುಣಿಗಲ್ ರಸ್ತೆಯ ಪಕ್ಕದಲ್ಲಿವೆ. ಈಗ ಸಣ್ಣ ಗುಡಿಯೊಂದನ್ನು ಕಟ್ಟಿದ್ದಾರೆ.

-ತ.ನಂ. ಜ್ಞಾನೇಶ್ವರ

Saturday, January 9, 2021

ಇಂದಿನ ಕಾಲಕ್ಕೆ ಕುವೆಂಪು ಅವರ ವಿಚಾರಗಳ ಪ್ರಸ್ತುತತೆ

 

ಇಂದಿನ ಕಾಲಕ್ಕೆ ಕುವೆಂಪು ಅವರ ವಿಚಾರಗಳ ಪ್ರಸ್ತುತತೆ

ತ.ನಂ. ಜ್ಞಾನೇಶ್ವರ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾಲಹಳ್ಳಿ-584116, ರಾಯಚೂರು ಜಿಲ್ಲೆ

ಮೊ.: 9164389346 ಇ-ಮೇಲ್:‌ gnaneswaratn@gmail.com

___________________________________________________________________________________

ಕುವೆಂಪು ಅವರು ಕನ್ನಡ ಸಾಹಿತ್ಯ ಕಂಡ ಮೇರು ಕವಿ. ವೈಚಾರಿಕತೆ ಅವರ ಸಾಹಿತ್ಯದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಯಾವ ವರ್ಗ ಅವರನ್ನು ʼದಂತಗೋಪುರದ ಕವಿʼ ಎಂದು ಬಿಂಬಿಸಲು ಪ್ರಯತ್ನಿಸಿತೋ ಆ ವರ್ಗಕ್ಕೆ ಇಲ್ಲದ ಸಾಮಾಜಿಕ ಕಳಕಳಿ ಕುವೆಂಪು ಅವರಲ್ಲಿ ಇತ್ತು ಎನ್ನುವುದು ಅವರ ಸಾಹಿತ್ಯವನ್ನು ಓದಿದ ಯಾರ ಅನುಭವಕ್ಕಾದರೂ ಬರುತ್ತದೆ. ಕುವೆಂಪು ಅವರ ವಿಚಾರಗಳು ಅಂದಿಗಿಂತ ಇಂದಿಗೇ ಹೆಚ್ಚು ಪ್ರಸ್ತುತವಾಗಿವೆ ಎನಿಸುತ್ತದೆ.

ಕುವೆಂಪು ಅವರು ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂಬ ಕೃತಿಯ ಮುನ್ನುಡಿಯಲ್ಲಿ “ವಿವೇಕ ಮತ್ತು ವಿಚಾರದ ಹನನ ಯಜ್ಞವೆ ನಡೆಯಲು ಮೊದಲಾದಾಗ ʼವಿಚಾರವಾದʼ ಮತ್ತು ʼವೈಜ್ಞಾನಿಕ ದೃಷ್ಟಿʼಗಳನ್ನು ಕೇಳುವವರು ಯಾರು?” ಎಂದು ವಿಷಾದಪಡುತ್ತಾರೆ. ಮುಂದುವರಿದುಮತಾಂಧತೆ, ಮತಭ್ರಾಂತಿ, ಮತದ್ವೇಷ ಮತ್ತು ಮತಸ್ವಾರ್ಥತೆ ಇವು ʼವಿಚಾರವಾದʼ ಮತ್ತು ʼವೈಜ್ಞಾನಿಕ ದೃಷ್ಟಿʼಗಳಿಗೆ ಕೊಟ್ಟ ಪೆಟ್ಟಿನಿಂದ ಅವಕ್ಕೆ ಸೊಂಟ ಮುರಿದಂತಾಗಿ ತೆವಳಿಕೊಂಡು ಮುನ್ನಡೆಯುವಂತಾಗಿದೆ” ಎಂದು ಮರುಕಪಡುತ್ತಾರೆ. “ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗ ಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೆ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರಿದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ” ಎಂದು ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ. “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೆ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆ” ಎಂದು ಕುವೆಂಪು ವ್ಯಥೆಪಡುತ್ತಾರೆ.

“ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ... ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ ʼಅಭದ್ರ ವಿಜ್ಞಾನʼಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ ʼಸುಭದ್ರ ಅಜ್ಞಾನʼಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ ʼನಿಮಿತ್ತʼಕ್ಕೆ ಶರಣಾಗಿ, ತನ್ನ ನಿವಾಸದಿಂದಾದರೂ ಆ ಸುಮೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಮಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ – ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಾಗಿದೆ[1]” ಎಂದು ತಮ್ಮ ವ್ಯಥೆಯನ್ನು ತೋಡಿಕೊಳ್ಳುತ್ತಾರೆ. ತಮ್ಮ ಉಪನ್ಯಾಸದಲ್ಲಿ “ಜನರ ಮೌಢ್ಯವನ್ನು ಬಂಡವಾಳವಾಗಿಸಿಕೊಂಡು ಹೊಟ್ಟೆಹೊರೆದುಕೊಳ್ಳುವವರನ್ನು ಕುರಿತು “ಯಾವ ರೂಪದಲ್ಲಿಯೆ ಆಗಲಿ, ಯಾವ ವೇಷದಲ್ಲಿಯೆ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ[2]” ಎನ್ನುತ್ತಾರೆ.

ಅದೇ ಉಪನ್ಯಾಸದಲ್ಲಿ “ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ. ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಬಿಡಬೇಡಿ.... ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.... ನಂಬುಗೆ ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ[3]” ಎಂದು ಹೇಳುತ್ತಾರೆ. ತಮ್ಮ ಕವನವೊಂದರಲ್ಲಿ ಹೀಗೆ ಹೇಳುತ್ತಾರೆ:

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

 

ನೀರಡಿಸಿ ಬಂದ ಸೋದರಗೆ ನೀರನು ಕೊಡಲು

ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?

ನೊಂದವನ ಕಂಬನಿಯನೊರಸಿ ಸಂತೈಸುವೊಡೆ

ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?

 

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ

ದಡದಲ್ಲಿ ಮೀಯುತ್ತಾ ನಿಂತಿರುವ ನಾನು

ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು

ಸುಮ್ಮನಿದ್ದರೆ ಶಾಸ್ತ್ರ ಸಮ್ಮತವದೇನು?

 

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,

ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;

ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ

ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ !

 

ಅವರ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ(ʼವಿಚಾರ ಕ್ರಾಂತಿಗೆ ಆಹ್ವಾನʼ)ದಲ್ಲಿ “ಚುನಾವಣೆಯ ರೀತಿಯನ್ನೆ ಬದಲಾಯಿಸದಿದ್ದರೆ ಮಾನಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ಯೋಗ್ಯನೂ ಅದರಲ್ಲಿ ಪಾಲುಗೊಳ್ಳುವ ಸಂಭವವಿಲ್ಲ. ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ವ್ಯಕ್ತಿಯಾಗಲಿ ಯಾವ ಪಕ್ಷವಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವೆ ಇಲ್ಲ... ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೆಯೆ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಅಮೂರ್ತ ವಸ್ತು, ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದೆ.... ಅದರ ಹೆಸರು ʼಮತʼ! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ[4]” ಎನ್ನುತ್ತಾರೆ.

ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಉಪನ್ಯಾಸದಲ್ಲಿ “ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; - ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ[5]” ಎನ್ನುತ್ತಾರೆ.

ಗೋಹತ್ಯೆಯ ಬಗ್ಗೆ ಕುವೆಂಪು ಹೀಗೆ ಹೇಳುತ್ತಾರೆ: “ಗೋಹತ್ಯೆಯನ್ನು ಉಗ್ರವಾಗಿ ಮತೀಯವಾಗಿ ಪ್ರತಿಪಾದಿಸುತ್ತಿರುವವರು ತಿಳಿಯರು, ವೇದದ ಕಾಲದಲ್ಲಿ ಗೋಹತ್ಯೆ ಮಂತ್ರಪೂತವಾಗಿಯೇ ನಡೆದಿತ್ತು ಎಂಬುದನ್ನು, ಮಂತ್ರವತ್ತಾಗಿಯೇ ನಡೆದಿತ್ತು ಎಂಬುದನ್ನು[6].

ತಮ್ಮ ಒಂದು ಕವನದಲ್ಲಿ ಕೆಳಕಂಡಂತೆ ಕರೆಕೊಡುತ್ತಾರೆ:

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ,

ಬಡತನವ ಬುಡಮಟ್ಟ ಕೀಳಬನ್ನಿ.

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ.

ಓ, ಬನ್ನಿ, ಸೋದರರೆ, ಬೇಗ ಬನ್ನಿ!

 

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;

ಮತಿಯಿಂದ ದುಡಿಯಿರೈ ಲೋಕಹಿತಕೆ.

ಮತದ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ:

ಓ, ಬನ್ನಿ, ಸೋದರರೆ, ವಿಶ್ವಪಥಕೆ!

“ಸಮಾಜವಾದದ ಪ್ರಜಾಸತ್ತೆ ನಿಮ್ಮ ಗುರಿಯಾಗಿದ್ದರೆ ಮತಭಾವನೆಯ ಶನಿಸಂತಾನವಾದ ಜಾತಿಪದ್ಧತಿಯ ಸಂಪೂರ್ಣ ವಿನಾಶಕ್ಕೆ ನೀವು ಕಂಕಣ ಕಟ್ಟಿಕೊಂಡು ಹೋರಾಡಬೇಕು[7]” ಎನ್ನುತ್ತಾರೆ ಕುವೆಂಪು. ಅವರು ತಮ್ಮ ವಿಶ್ವಮಾನವ ಸಂದೇಶದಲ್ಲಿ “ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ[8]” ಎಂದು ಹೇಳುತ್ತಾರೆ.

ತ್ರಿಭಾಷಾ ಸೂತ್ರದ ಕುರಿತು ಕುವೆಂಪು ಅವರು ಹೀಗೆ ಹೇಳುತ್ತಾರೆ: “ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆ ʼಬಹುಭಾಷೆಗಳಲ್ಲಿ ದ್ವಿಭಾಷೆʼ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು[9].”

ಮದ್ಯಪಾನದ ಬಗ್ಗೆ ಕುವೆಂಪು ಹೇಳುವುದು ಹೀಗೆ: “ಮದ್ಯಪಾನದಿಂದ ಮನುಷ್ಯನಿಗೆ ತಾತ್ಕಾಲಿಕ ಉತ್ಸಾಹ ಉಲ್ಲಾಸಗಳು ತೋರಿಬಂದರೂ ಪರಿಣಾಮದಲ್ಲಿ ಅದು ಅನರ್ಥಕಾರಿ. ದೇಹವನ್ನು ನಿರ್ವೀರ್ಯವನ್ನಾಗಿಯೂ ಮನಸ್ಸನ್ನು ನಿಸ್ತೇಜವನ್ನಾಗಿಯೂ ಮಾಡಿ ಆತ್ಮನಾಶಗೈಯುತ್ತದೆ[10].

ಕುವೆಂಪು ಅವರು ಮೂಢನಂಬಿಕೆಗಳನ್ನು ನಿರಾಕರಿಸುತ್ತಾರೆ. ಮತಾಂಧತೆ, ಮತಭ್ರಾಂತಿ, ಮತದ್ವೇಷಗಳನ್ನು ಖಂಡಿಸುತ್ತಾರೆ. ವಿಚಾರವಾದ ಮತ್ತು ವೈಜ್ಞಾನಿಕ ದೃಷ್ಟಿಗಳನ್ನು ಬೆಂಬಲಿಸುತ್ತಾರೆ. ಯಾವ ಕಾಲದಲ್ಲಿಯೋ ಬರೆದಿಟ್ಟ ಶಾಸ್ತ್ರಗಳನ್ನು ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ ಎನ್ನುತ್ತಾರೆ. ಪ್ರಜಾಸತ್ತೆ ಕಲುಷಿತವಾಗಲು ಕಾರಣವಾಗಿರುವ ಭ್ರಷ್ಟಾಚಾರ, ಜಾತಿ, ಮತಗಳನ್ನು ವರ್ಜಿಸಲು ಕರೆ ಕೊಡುತ್ತಾರೆ. ಅವರ ವಿಚಾರಗಳು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

(ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಇವರು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಎರಡನೆಯ ಬಹುಮಾನ ಪಡೆದ ಪ್ರಬಂಧ. ಕೊನೆಯ ಪ್ಯಾರಾವನ್ನು ನಂತರ ಸೇರಿಸಲಾಗಿದೆ.) 



[1] ಕುವೆಂಪು, ಮುನ್ನುಡಿ, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮

[2] ಕುವೆಂಪು, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮, ಪು. ೩

[3] ಅದೇ

[4] ಕುವೆಂಪು, ʼವಿಚಾರ ಕ್ರಾಂತಿಗೆ ಆಹ್ವಾನʼ, ಉದಯರವಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ, ೨೦೦೪, ಪು. ೫-೬

[5] ಕುವೆಂಪು, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮, ಪು. ೨

[6] ಕುವೆಂಪು, ʼಮನುಜಮತ ವಿಶ್ವಪಥʼ, ಉದಯರವಿ ಪ್ರಕಾಶನ, ಮೈಸೂರು, ಐದನೆಯ ಮುದ್ರಣ, ೧೯೯೭, ಪು. ೨೪

[7] ಕುವೆಂಪು, ʼವಿಚಾರ ಕ್ರಾಂತಿಗೆ ಆಹ್ವಾನʼ, ಉದಯರವಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ, ೨೦೦೪, ಪು. ೬

[8] ಕುವೆಂಪು, ʼಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶʼ, ಉದಯರವಿ ಪ್ರಕಾಶನ, ಮೈಸೂರು, ಮೂರನೆಯ ಮುದ್ರಣ, ೧೯೯೮, ಪು. 20

[9] ಕುವೆಂಪು, ʼವಿಚಾರ ಕ್ರಾಂತಿಗೆ ಆಹ್ವಾನʼ, ಉದಯರವಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ, ೨೦೦೪, ಪು. 97

 

[10] ಕುವೆಂಪು, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮, ಪು. ೧೫

Sunday, June 21, 2020

Dr. H Narasimhaiah

This video is about Dr. H Narasimhaiah, a well known Gandhian and a rationalist from Karnataka.


Saturday, March 7, 2020

ಕುಣಿಗಲ್ ನ ಹೆಮ್ಮೆಯ ಕುದುರೆ ಫಾರಂ



      ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಕುಣಿಗಲ್ ಪಟ್ಟಣದ ಹೃದಯ ಭಾಗದಲ್ಲಿರುವ ಸ್ಟಡ್ ಫಾರ್ಮ್ ಭಾರತದ ಅತ್ಯಂತ ಹಳೆಯ ಕುದುರೆ ಸಾಕಾಣಿಕಾ ಕೇಂದ್ರ. ದೇಶದಲ್ಲಿ 40 ಪ್ರಮುಖ ಸ್ಟಡ್ ಫಾರ್ಮ್ಗಳಿದ್ದು, ಇದು ಮೂರನೇ ಸ್ಥಾನದಲ್ಲಿದೆ. ಕುಣಿಗಲ್ ಸ್ಟಡ್ ಫಾರ್ಮ್ಗೆ ವಿದೇಶಗಳಿಂದಲೂ ಖರೀದಿಗೆ ಬರುತ್ತಾರೆ. ಪಾರಂಪರಿಕ ತಾಣವಾಗಿರುವ ಕುದುರೆ ಫಾರಂ ಕುಣಿಗಲ್ ಪ್ರಧಾನ ಆಕರ್ಷಣೆ ಹಾಗೂ ಪ್ರತಿಷ್ಠೆಯ ಸಂಕೇತವಾಗಿದೆ.

ಇತಿಹಾಸ
      ಮೈಸೂರು ಹುಲಿಟಿಪ್ಪು ಸುಲ್ತಾನ್ ಸ್ಟಡ್ ಫಾರ್ಮ್ ನಿರ್ಮಾತೃ ಎಂದು ಇತಿಹಾಸ ಹೇಳುತ್ತದೆ. ಟಿಪ್ಪು ತನ್ನ ಸೈನ್ಯಕ್ಕಾಗಿ ಅರೇಬಿಯನ್ ಕುದುರೆಗಳನ್ನು ಇಲ್ಲಿ ಸಾಕುತ್ತಿದ್ದ. ಮೈಸೂರು ಸಾಮ್ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡ ನಂತರ ಸ್ಟಡ್ ಫಾರ್ಮ್ ಬ್ರಿಟಿಷರ ಅಧೀನಕ್ಕೆ ಬಂದಿತು. ಬ್ರಿಟಿಷರು ತಮ್ಮ ಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಸಾಕಲು ಫಾರ್ಮನ್ನು ಬಳಸಿಕೊಂಡರು. 1850ರಲ್ಲಿ ಆಫ್ರಿಕ ತಳಿಗಳನ್ನು ತರಿಸಿದರು. ಕಾಲದಲ್ಲಿ ಉಪಯೋಗಿಸಿದ ಬೀಜದ ಕುದುರೆಗಳು ಮುಖ್ಯವಾಗಿ ಶುದ್ಧತಳಿ ಅಂದುಕೊಂಡಿದ್ದ ಅರಬ್ಬೀ ಮತ್ತು ವೇಲರ್ ಜಾತಿಯವು. 1886ರಲ್ಲಿ ವಿದೇಶದಿಂದಪೆರೊ ಗೊಮೆಜ್’ (Pero Gomez) ಎಂಬ ಕುದುರೆಯನ್ನು ತರಿಸಲಾಯಿತು. ನಂತರ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾಗಳಿಂದ ಕುದುರೆಗಳನ್ನು ತರಿಸಲು ಆರಂಭಿಸಿದರು. 1936ರಲ್ಲಿ ಜೆ.ಜೆ.ಮಲ್ಲಿಕ್ ಎಂಬ ಬ್ರಿಟಿಷ್ ಅಧಿಕಾರಿ ಫಾರ್ಮನ್ನು ಉತ್ತಮಗೊಳಿಸಲು ನಿಯಮಿತನಾದ. ಆತ ಸ್ಥಳೀಯ ಹೆಣ್ಣು ಕುದುರೆಗಳನ್ನೆಲ್ಲ ವಿಸರ್ಜಿಸಿ ರೇಸ್ಗೆ ಬೇಕಾದ ಕುದುರೆಗಳನ್ನು ಅಭಿವೃದ್ಧಿಪಡಿಸಿದ. ಇಲ್ಲಿ ಬೆಳೆಸಿದ ಕುದುರೆಗಳು ಇಂಗ್ಲೆಂಡ್, ಆಸ್ತ್ರೇಲಿಯಾಗಳಿಂದ ತರಿಸಿದ ಕುದುರೆಗಳಿಗೆ ಪೈಪೋಟಿ ನೀಡಿದವು. ವಿದೇಶಗಳಿಂದ ತರಿಸಿದ ಕುದುರೆಗಳಿಗೆ ಪೈಪೋಟಿ ನೀಡಿದ ಮೊದಲ ಸ್ವದೇಶಿ ಕುದುರೆ ಕುಣಿಗಲ್ ಫಾರ್ಮ್ನಲ್ಲಿ ಬೆಳೆಸಿದವೆಟ್’ (Yvette) ಎಂಬ ಕುದುರೆ. 1948ರಲ್ಲಿ ಫಾರ್ಮ್ ಮೈಸೂರು ಸರ್ಕಾರದ ವಶಕ್ಕೆ ಬಂದಿತು. ಪಶುಪಾಲನಾ ಇಲಾಖೆಯ ಅಧೀನದಲ್ಲಿ ಬಂದ ಅದರ ನಿರ್ವಹಣೆ ಕಷ್ಟವಾಯಿತು. ಲಾಭದ ಬದಲು ನಷ್ಟದ ಹಾದಿ ಹಿಡಿಯಿತು. ಬೆಂಗಳೂರು ಟರ್ಫ್ ಕ್ಲಬ್ಗೆ ಗುತ್ತಿಗೆ ನೀಡಲಾಯಿತಾದರೂ ನಿಭಾಯಿಸಲಾಗಲಿಲ್ಲ. ನಂತರ 1992ರಲ್ಲಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಾಯಿತು. ಉದ್ಯಮಿ ವಿಜಯ ಮಲ್ಯ ಒಡೆತನದ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ ಸ್ಟಾಕ್ ಬ್ರೀಡರ್ ಸಂಸ್ಥೆಗೆ 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಸಂಸ್ಥೆ ಸರ್ಕಾರಕ್ಕೆ ಪ್ರತಿವರ್ಷ 36 ಲಕ್ಷ ರೂ.ಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದೆ

ವರ್ತಮಾನ
      504 ಎಕರೆ ವಿಸ್ತೀರ್ಣವನ್ನು ಹೊಂದಿದ್ದ ಕುದುರೆ ಫಾರ್ಮ್ 64 ಎಕರೆ ಜಾಗವನ್ನು ಕೋರ್ಟ್, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಪ್ರಥಮ ದರ್ಜೆ ಕಾಲೇಜು ಮುಂತಾದ ಸೌಲಭ್ಯಗಳಿಗಾಗಿ ಈಗಾಗಲೇ ಬಿಟ್ಟುಕೊಟ್ಟಿದೆ. ಈಗ ಇರುವ ಜಾಗವನ್ನು ಬೇರೆ ಬೇರೆ ಅಳತೆಯ 25 ಪ್ಯಾಡಕ್(paddock)ಗಳಾಗಿ ವಿಂಗಡಿಸಲಾಗಿದೆ. ಅಮೆರಿಕ, ಬ್ರಿಟನ್ ಹಾಗೂ ಐರ್ಲ್ಯಾಂಡ್ ತಳಿಗಳನ್ನು ಇಲ್ಲಿ ಸಾಕಲಾಗುತ್ತಿದೆ.  ಪ್ರಸ್ತುತ 4 ಬೀಜದ ಕುದುರೆ, 166 ಮರಿಗಳು ಸೇರಿದಂತೆ 270 ಕುದುರೆಗಳು ಇವೆ. ಇದರಲ್ಲಿ ಅರ್ಧದಷ್ಟು ಮರಿಗಳನ್ನು ವಿಜಯ ಮಲ್ಯ ಅವರು ಸ್ವಂತ ರೇಸ್ಗಾಗಿ ಇಟ್ಟುಕೊಳ್ಳುತ್ತಾರೆ. ಉಳಿದ ಅರ್ಧದಷ್ಟು ಮರಿಗಳನ್ನು ಮಾರಾಟ ಮಾಡಲಾಗುತ್ತದೆ. ‘ಬೋಲ್ಡ್ ರಷ್ಯನ್’ (Bold Russian) ಎಂಬ ವಿದೇಶದಿಂದ ತರಿಸಿದ ಕುದುರೆ ಅಮೆರಿಕ ಹಾಗೂ ಇಂಗ್ಲೆಂಡ್ಗಳಲ್ಲಿ ನಡೆದ ಅನೇಕ ರೇಸ್ಗಳಲ್ಲಿ ಗೆದ್ದಿದೆ. ಬ್ರೇವ್ ಆಕ್ಟ್ (Brave Act) ಹಾಗೂ ತೇಜನೊ (Tejano) ವಿದೇಶದಿಂದ ತರಿಸಿದ ಇತರ ಮುಖ್ಯ ಕುದುರೆಗಳು. ಭಾರತದಲ್ಲೇ ಬೆಳೆಸಿದ ಆಡ್ಲರ್ ಎಂಬ ಕುದುರೆ ಭಾಗವಹಿಸಿದ 9 ರೇಸ್ಗಳಲ್ಲೂ ಜಯ ದಾಖಲಿಸಿದ ಹೆಗ್ಗಳಿಕೆ ಹೊಂದಿದೆ. ಕುದುರೆಗೆ ಅಮೆರಿಕದಲ್ಲಿ ನಡೆದ ರೇಸ್ನಲ್ಲಿ ಗೆದ್ದ ಭಾರತದಲ್ಲೇ ಬೆಳೆಸಲಾದ ಮೊದಲ ಕುದುರೆ ಎಂಬ ಹೆಗ್ಗಳಿಕೆಯೂ ಇದೆ. ಲಿಟ್ಲ್ ಓವರ್ (Littleover), ಸ್ಟಾರ್ ಫೈರ್ ಗರ್ಲ್ (Starfire Girl), ಸೂಪರ್ ವೈಟ್ (Supervite) ಎಂಬವು ರೇಸ್ಗಳಲ್ಲಿ ಗೆಲ್ಲುತ್ತಿರುವ ಹೆಣ್ಣು ಕುದುರೆಗಳಾಗಿವೆ. ಇದೇ ಫಾರ್ಮ್ನಲ್ಲೇ ಬೆಳೆಸಿದ ಸ್ಯಾಡ್ಡ್ಲ್ ಅಪ್ ಎಂಬ ಕುದುರೆ ಭಾರತದಲ್ಲೇ ಅಲ್ಲದೆ ಸಿಂಗಾಪುರ ಮತ್ತು ಮಲೇಷಿಯಾಗಳಲ್ಲೂ ಜಯ ದಾಖಲಿಸಿ ಆಲ್ ಏಷ್ಯನ್ ಚಾಂಪಿಯನ್ ಆಗಿದೆ. ‘ಬರ್ಡನ್ ಆಫ್ ಪ್ರೂಫ್’ (Burden of Proof) ಎಂಬ ಕುದುರೆಯ ಅನೇಕ ಮರಿಗಳು ರೇಸ್ಗಳಲ್ಲಿ ಗೆದ್ದಿವೆ. ‘ಬೆಂಗಳೂರು ರೇಸ್ ಸೀಸನ್ಸ್ಪರ್ಧೆಯಲ್ಲಿ 2006ರಲ್ಲಿ 31 ಹಾಗೂ 2007ರಲ್ಲಿ 39 ಗೆಲುವುಗಳನ್ನು ದಾಖಲಿಸುವ ಮೂಲಕ ಕುಣಿಗಲ್ ಸ್ಟಡ್ ಫಾರ್ಮ್ಲೀಡಿಂಗ್ ಸ್ಟಡ್ ಫಾರ್ಮ್ಪ್ರಶಸ್ತಿ ಪಡೆದಿದೆ

ಲಭ್ಯವಿರುವ ಸೌಲಭ್ಯಗಳು
      ರೇಸ್ ಕುದುರೆಗಳು, ಗಂಡು ಕುದುರೆ, ಹೆಣ್ಣು ಕುದುರೆಗಳಿಗೆ ಅಗತ್ಯಕ್ಕೆ ತಕ್ಕಂತೆ ಆಹಾರ ನೀಡಲಾಗುತ್ತದೆ. ಹಸಿರು ಹುಲ್ಲಿನ ಜೊತೆಗೆ ಜೋಳ, ಸೋಯಾ, ಬಾರ್ಲಿ, ಶಕ್ತಿ ಕೊಡುವ ಇತರ ಆಹಾರವನ್ನು ಕೊಡಲಾಗುತ್ತದೆ. ಕುಣಿಗಲ್ ನೆಲ ಕುದುರೆಗಳ ಸಾಕಾಣಿಕೆಗೆ ಸೂಕ್ತವಾಗಿದೆ. ಕುದುರೆಗಳು ಮೇಯಲು ಬೇಕಾದ ಹುಲ್ಲುಗಾವಲು ಹಾಗೂ  ಕುದುರೆಗಳ ಆಹಾರಕ್ಕೆ ಬೇಕಾದ ಆಲ್ಫಾಲ್ಫಾ, ಗ್ರೀನ್ ಓಟ್ಸ್ ಹಾಗೂ ರೋಡ್ಸ್ ಗ್ರ್ಯಾಸ್ ಬೆಳೆಸಲಾಗಿದೆ. ಒಳ್ಳೆಯ ಗುಣಮಟ್ಟದ ಆಸ್ಟ್ರೇಲಿಯನ್ ಓಟ್ಸ್ ಅನ್ನು ಕುದುರೆಗಳ ಆಹಾರಕ್ಕಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಕುದುರೆಗಳಿಗೆ ಬೇಕಾದ ಹಾಲು, ಮಜ್ಜಿಗೆಗಾಗಿ ಹಸುಗಳನ್ನು ಸಾಕಲಾಗಿದೆ. ಕುದುರೆಗಳಿಗಾಗಿ ಶುದ್ಧವಾದ ಕಡಿಯುವ ನೀರನ್ನು ಒದಗಿಸಲು ಫಿಲ್ಟರ್ ವ್ಯವಸ್ಥೆ ಇದೆ. ಕುದುರೆಗಳಿಗೆ ಪಶುವೈದ್ಯರ ಸೌಲಭ್ಯ ಒದಗಿಸಲಾಗಿದ್ದು ಪಶುವೈದ್ಯರನ್ನು ರಾಷ್ಟ್ರಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಕುದುರೆಗಳಿಗೆ ತರಬೇತಿ ನೀಡಲು ಕುದುರೆ ಸವಾರಿ ತರಬೇತಿ ಶಾಲೆ ಇದೆ. 2007ರಲ್ಲಿ 3 ಕುದುರೆಗಳು ಓಡಲು ಅವಕಾಶವಿರುವ 7 ಫರ್ಲಾಂಗ್ ದೂರದ ಟ್ರ್ಯಾಕ್ ನಿರ್ಮಿಸಲಾಗಿದೆ. ಫಾರ್ಮ್ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು ಕೆಲಸ ಮಾಡುವ ಸಿಬ್ಬಂದಿಗಾಗಿ ವಸತಿ ಗೃಹಗಳಿವೆ. ಸ್ಟಡ್ ಫಾರ್ಮ್ ಆವರಣದಲ್ಲಿ ಮರದಿಂದ ನಿರ್ಮಿಸಲಾದ ಒಂದು ಭವ್ಯವಾದ ಗೆಸ್ಟ್ ಹೌಸ್ ಇದ್ದು ಅದು ಕೆಲವು ವರ್ಷಗಳ ಹಿಂದೆ ಸಿಡಿಲಿನ ಆಘಾತಕ್ಕೆ ಒಳಗಾಗಿ ನಾಶವಾಗಿತ್ತು. ನಂತರ ಅದನ್ನು ಮತ್ತೆ ಯಥಾವತ್ತಾಗಿ ನಿರ್ಮಿಸಲಾಗಿದೆ. ಗೆಸ್ಟ್ ಹೌಸಿನ ಮುಂದೆ ಒಂದು ಈಜುಕೊಳವಿದೆ. ಫಾರ್ಮಿನಲ್ಲಿ ಗಂಧದ ಮರಗಳೂ ಸೇರಿದಂತೆ ಶತಮಾನದಷ್ಟು ಹಳೆಯದಾದ ಮರಗಳಿವೆ. ಇತ್ತೀಚೆಗೆ ಸ್ಟಡ್ ಫಾರ್ಮ್ ಅನ್ನು ಕುಣಿಗಲ್ ಪಟ್ಟಣದ ಮೂಲಕ ಹಾದುಹೋಗಿರುವ ಬೆಂಗಳೂರು-ಹಾಸನ ಬ್ರಾಡ್ಗೇಜ್ ರೈಲು ಮಾರ್ಗವು 60:40 ಅನುಪಾತದಲ್ಲಿ ಇಬ್ಭಾಗವಾಗಿಸಿದೆ.


-.ನಂ. ಜ್ಞಾನೇಶ್ವರ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾಲಹಳ್ಳಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ. ಪಿನ್: 584116 ಮೊ: 9164389346 -ಮೇಲ್: gnaneswaratn@gmail.com